ಗ್ರೇಟ್ ಬೇಸಿನ್

	ಅಮೆರಿಕ ಸಂಯುಕ್ತಸಂಸ್ಥಾನಗಳ ಪಶ್ಚಿಮ ಭಾಗದಲ್ಲಿರುವ ಸ್ವಾಭಾವಿಕ ಜಲಾನಯನ ಪ್ರದೇಶ.  ತನ್ನ ವಿಶಿಷ್ಟ ಭೂ ಲಕ್ಷಣದಿಂದಾಗಿ ಅದು ಪ್ರಸಿದ್ಧವಾಗಿದೆ.  ಗ್ರೇಟ್ ಬೇಸಿನ್ ತಳಮೇಲದ ತ್ರಿಕೋಣದಂತಿದೆ.  ವಿಸ್ತಾರ 1,89,000ಚ. ಮೈ.  ಇದು ಉಂಟಾದ ಪಶ್ಚಿಮದಲ್ಲಿ ಆ ರಾಜ್ಯದ  ಭಾಗವನ್ನೂ ಇಡೀ ನೆವಾಡವನ್ನೂ ಆವರಿಸಿಕೊಂಡು ಕ್ಯಾಲಿಫೋರ್ನಿಯ, ದಕ್ಷಿಣ ಆರಿಗಾನ್ ಮತ್ತು ಇಡಾಹೊಗಳಲ್ಲೂ ಸ್ವಲ್ಪ ಹಬ್ಬಿದೆ.  ಪಶ್ಚಿಮಕ್ಕೆ ಸಿಯೆರ ನೆವಾಡ, ಪೂರ್ವಕ್ಕೆ ವಾಸ್ಯಾಚ್ ಪರ್ವತಶ್ರೇಣಿ ಮತ್ತು ಕಾಲೊರಾಡೋ ಪ್ರಸ್ಥಭೂಮಿ, ದಕ್ಷಿಣಕ್ಕೆ ಮೊಜಾವೆ ಮುರುಭೂಮಿ - ಇವು ಇದರ ಮೇರೆಗಳು.

	ಗ್ರೇಟ್ ಬೇಸಿನ್ ಸಂವೃತಪ್ರವಾಹ ಪ್ರದೇಶ ; ನೀರಿನ ಪ್ರವಾಹ ಹೊರಕ್ಕೆ ಹರಿದು ಸಮುದ್ರ ಸೇರುವುದಿಲ್ಲ.  ಪರ್ವತಶ್ರೇಣಿಗಳು ಇದನ್ನು ವಿಭಾಗಿಸಿವೆ.  ಮುಖ್ಯ ಶ್ರೇಣಿಗಳು ದಕ್ಷಿಣೋತ್ತರವಾಗಿ ಹಬ್ಬಿವೆ.  ಪರ್ವತಶ್ರೇಣಿಗಳ ನಡುವಣ ಕಣಿವೆಗಳು ವಿಶಾಲವಾಗಿವೆ.  ಮೆಕ್ಕಲುಮಣ್ಣಿನಿಂದ ಕೂಡಿವೆ.  ಪರ್ವತಾಗ್ರಗಳು ಪಾದದಿಂದ 3,000 - 5,000  ಎತ್ತರದಲ್ಲಿವೆ.

	ಕಣಿವೆಗಳಲ್ಲಿ ಹರಿಯುವ ನೀರು ಸರೋವರಗಳನ್ನು ಸೇರುತ್ತವೆ.  ಅವುಗಳಲ್ಲಿ ಬಹುತೇಕ ಉಪ್ಪು ನೀರಿನ ಸರೋವರಗಳು.  ಅವುಗಳಲ್ಲಿ ಗ್ರೇಟ್ ಸಾಲ್ಟ್ ಲೇಕ್ ಪ್ರಸಿದ್ಧವಾದ್ದು.  ಇಲ್ಲಿ ಮಳೆ ವರ್ಷಕ್ಕೆ 4 - 12.  ಶುಷ್ಕ ವಾಯುಗುಣದಿಂದಾಗಿ ಹೊರಗೆ ಹರಿದು ಹೋಗುವಷ್ಟು ನೀರು ಸಂಗ್ರಹವಾಗುವುದಿಲ್ಲ.  ಸರೋವರಗಳು ಬದಲಾಗುತ್ತಿರುತ್ತವೆ.

	ಇಲ್ಲಿಯ ಕಣಿವೆಗಳಲ್ಲಿ ಉಪ್ಪು ಹುಲ್ಲು ಮತ್ತು ಗ್ರೀಸ್‍ವುಡ್ ಬೆಳೆಯುತ್ತವೆ.  ತಗ್ಗಿನ ನೆಲದಲ್ಲಿ ಹರಿಯುವ ಕೆಲವು ತೊರೆಗಳ ದಂಡೆಗಳ ಮೇಲೆ ಕಾಟನ್‍ವುಡ್ ಮರಗಳಿವೆ.  ಇಳಿಜಾರುಪ್ರದೇಶಗಳಲ್ಲಿ ಸೇಜ್‍ಬ್ರಷ್, ಕುರುಚಲು ಓಕ ಮತ್ತು ಜೂನಿಪರ್ ಉಂಟು, ದಕ್ಷಿಣದಲ್ಲಿ ಉಪೋಷ್ಣವಲಯದ ಮರುಭೂಮಿ ಸಸ್ಯಗಳಿವೆ.  ಎತ್ತರ ಪ್ರದೇಶಗಳಲ್ಲಿ ಪೈನ್, ಸ್ಟ್ರೂಸ್ ಕಾಡುಗಳಿವೆ.  ತಾಮ್ರ ಮತ್ತು ಕಬ್ಬಿಣ ಅದಿರು ಇಲ್ಲಿ ಸಿಗುತ್ತವೆ.  ಗಣಿ ಉದ್ಯಮ ಮತ್ತು ಪಶುಸಂಗೋಪನೆ ಮುಖ್ಯ ಜೀವನೋಪಾಯಗಳು.  ನಗ್ನೀಕರಣಕ್ಕೆ ಒಳಗಾಗುವ ಒಣಪ್ರದೇಶಗಳ ಸ್ವರೂಪವನ್ನೂ ನಗ್ನೀಕರಣದ ಹಂತಗಳನ್ನೂ ಗ್ರೇಟ್ ಬೇಸಿನಿನಲ್ಲಿ ಕಾಣಬಹುದು.
(ಎಸ್.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ